ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಚುನಾವಣೆಗಳನ್ನು ನಡೆಸಲು ಸುಪ್ರಿಂ ಕೋರ್ಟ್ ತನ್ನ ಮದ್ಯಂತರ ಆದೇಶದಲ್ಲಿ ಸ್ಪಷ್ಟವಾದ ಆದೇಶ ನೀಡಿರುವುದು ಸ್ವಾಗತಾರ್ಹ. ಅದರಂತೆ ಚುನಾವಣಾ ಆಯೋಗ ಈಗಾಗಲೇ ಪ್ರಕಟಿಸಿದಂತೆ ಫೆಬ್ರವರಿ 21 ರಂದು ಚುನಾವಣೆ ನಡೆಯಬೇಕು. ಈಗಾಗಲೇ ಬೆಂಗಳೂರು ಮಹಾನಗರ ಪಾಲಿಕೆಯ ಅವಧಿ ಅಂತ್ಯಗೊಂಡು ಮೂರುವರೆ ವರುಷಗಳೇ ಆಗಿವೆ. ರಾಜಧಾನಿಯೂ ಆಗಿ ಮಹತ್ವವಿರುವ ಇಲ್ಲಿ ಚುನಾವಣೆಗಳು ನಡೆಸದಂತೆ ಒಂದಿಲ್ಲೊಂದು ಕಾರಣ ಮುಂದೊಡ್ಡಿ ಮುಂದೂಡುತ್ತಾ ಬಂದದ್ದು ಪ್ರಜಾಪ್ರಭುತ್ವಕ್ಕೆ ಮಾರಕವಾದುದು. ಹೀಗೆ ಜನತೆಯ ಹಕ್ಕುಗಳನ್ನು ನಿರಾಕರಿಸುತ್ತಾ ಬರಲಾಗಿತ್ತು. ಜನರಿಂದ ಚುನಾಯಿತವಾಗಿ ಜನತೆಯ ಆಶೋತ್ತರಗಳಿಗೆ ಸ್ಪಂದಿಸುತ್ತಾ ಆಡಳಿತ ನೀಡಬೇಕಾದ ಸ್ಥಾನದಲ್ಲಿ ಅಧಿಕಾರಶಾಹಿಯು ವಿಜೃಂಭಿಸಿದ್ದು ಸ್ಥಾಪಿತ ಹಿತಾಸಕ್ತಿಗಳ ವ್ಯವಸ್ಥಿತ ಕೈವಾಡವೇ ಆಗಿತ್ತು. ಹೈಕೋಟರ್್ ಆದೇಶದ ನಂತರ ಚುನಾವಣೆ ನಡೆಸಲು ಆಯೋಗ ಪ್ರಕಟಿಸಿದ ಬಳಿಕವೂ ಅದನ್ನು ಹೇಗಾದರೂ ಕಾರಣವೊಡ್ಡಿ ಮುಂದೂಡಲು ಕೊನೆಗಳಿಗೆವರೆಗೂ ಬಿಜೆಪಿಯು ಪ್ರಯತ್ನಿಸಿತು. ಚುನಾವಣೆಯಲ್ಲಿ ತಾನು ಸೋಲಬಹುದೆಂಬ ಆತಂಕದ ಜೊತೆಗೆ ಅಧಿಕಾರಶಾಹಿಗಳಿಂದ ತಮಗನ್ನಿಸಿದಂತೆ ಆಡಳಿತ ನಿಧರ್ಾರಗಳನ್ನು ಕೈಗೊಳ್ಳಬಹುದೆಂಬ ನಿಧರ್ಾರವೂ ಕಾರಣ. ಇದರಲ್ಲಿ ಭೂದಂಧೆಯಂತಹ ಅಕ್ರಮಗಳಲ್ಲಿ ತೊಡಗಿರುವ ಹಲವು ಶಕ್ತಿಗಳ ಪಾತ್ರವನ್ನು ಅಲ್ಲಗೆಳೆಯುವಂತಿಲ್ಲ. ಒಟ್ಟಾರೆ ಪ್ರಜಾಸತ್ತಾತ್ಮಕವಾಗಿ ಚುನಾಯಿತ ಪ್ರತಿನಿಧಿಗಳ ಆಡಳಿತವು ಅದೆಷ್ಟೇ ಮಿತಿ, ಕೊರತೆ, ದೌರ್ಬಲ್ಯಗಳ ನಡುವೆಯೂ ಉನ್ನತವಾದುದು ಎಂಬುದರಲ್ಲಿ ಅನುಮಾನವಿಲ್ಲ. ಹೀಗಾಗಿ ಚುನಾವಣೆಗಳು ಮುಕ್ತವಾಗಿ ನಡೆಯಬೇಕು.
ಇದೇ ಹೊತ್ತಿನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ನಿಯಮಾನುಸಾರವಾಗಿ ಮೀಸಲಿಡ ಬೇಕಾದ ಸ್ಥಾನಗಳ ಬಗ್ಗೆ ವಿವಾದ ಬಂದಿದ್ದು, ಸುಪ್ರಿಂ ಕೋರ್ಟ್ ಬೆಂಗಳೂರಿನ ವಿಧಾನಸಭಾ ಕ್ಷೇತ್ರವಾರಾಗಿ ಮೀಸಲಾತಿ ನಿಗದಿ ಮಾಡುವ ಹೈಕೋರ್ಟ್ನ ಏಕನ್ಯಾಯಮೂರ್ತಿಗಳ ಆದೇಶವನ್ನು ಎತ್ತಿಹಿಡಿದಿದೆ. ಇದನ್ನು ಬದಲಿಸಲು ಇಬ್ಬರು ನ್ಯಾಯಮೂರ್ತಿಗಳ ಬೆಂಚ್ ತನಗೆ ಮಾಡಿದ ಮನವಿ ಆಧರಿಸಿ ಬೆಂಗಳೂರು ಇಡಿಯಾಗಿ ಒಂದು ಘಟಕವನ್ನಾಗಿ ಪರಿಗಣಿಸಿ ಇಲ್ಲಿನ ಎಸ್.ಸಿ/ಎಸ್.ಟಿ ಸಂಖ್ಯೆಗನುಗುಣವಾಗಿ ಶೇಕಡಾವಾರು ಮೀಸಲಾತಿ ಪರಿಗಣಿಸಿ ಸ್ಥಾನ ನಿಗದಿ ಮಾಡಲು ಸೂಚಿಸಿತ್ತು. ಹೀಗಾದಲ್ಲಿ ವಿಧಾನಸಭಾ ಕ್ಷೇತ್ರ ಆಧಾರದಲ್ಲಿನ ಪರಿಗಣನೆಗಿಂತ ಹೆಚ್ಚಿನ ಕ್ಷೇತ್ರಗಳನ್ನು ಮೀಸಲಾತಿ ವ್ಯಾಪ್ತಿಗೆ ಬರಬಹುದಾಗಿದ್ದು ಹೆಚ್ಚಿನ ಸ್ಥಾನಗಳು ಸಿಗುತ್ತಿದ್ದವು. ರಾಜ್ಯದಲ್ಲಿನ ಪ.ಜಾ/ಪ.ಪಂಗಡಗಳ ಒಟ್ಟು ಜನಸಂಖ್ಯೆ ಆಧರಿಸಿಯೇ ಮೀಸಲು ಕ್ಷೇತ್ರಗಳನ್ನು ನಿಗದಿಪಡಿಸಲಾಗಿದೆ. ಇದೇ ವಿಧಾನ ಅನುಸರಿಸಬಹುದಿತ್ತು. ಈಗಲೂ ಪೂರ್ಣ ಆದೇಶ ಹೊರಡಿಸುವ ಮೊದಲು ಮತ್ತೊಮ್ಮೆ ಪರಿಶೀಲಿಸುವುದು ಅಗತ್ಯ. ಹೀಗಿರುವಾಗಲೂ ಚುನಾವಣೆಗಳನ್ನು ಇನ್ನೂ ಮುಂದಕ್ಕೆ ಹಾಕುವುದು ಸೂಕ್ತವಲ್ಲ. ಆದರೆ ಬಿಜೆಪಿ ಪಕ್ಷ ಹಾಗೂ ಸರ್ಕಾರ ಇದನ್ನೇ ಬಳಸಿ ಮುಂದೂಡಲು ಯತ್ನಿಸಿದ್ದು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ ಪರವಾಗಿ ಅಲ್ಲ. ಬದಲಾಗಿ ಅದನ್ನು ಬಳಸಿಕೊಂಡು ತನ್ನ ಉದ್ದೇಶ ಸಾಧಿಸಿಕೊಳ್ಳಲು ಇಲ್ಲವಾದಲ್ಲಿ ಕ್ಷೇತ್ರಗಳನ್ನು ಗುರುತಿಸಲು ಮೂರು ತಿಂಗಳ ಕಾಲಾವಕಾಶ ಕೇಳುತ್ತಿರಲಿಲ್ಲ. ಲಭ್ಯವಿರುವ ಆಧುನಿಕ ವಿಧಾನದಲ್ಲಿ ಇಡೀ ಬೆಂಗಳೂರು ಪ್ರದೇಶವನ್ನು ವಿಶ್ಲೇಷಿಸಿ, ಹೊಸ ಮೀಸಲಾತಿ ಕ್ಷೇತ್ರ ಪ್ರಕಟಿಸಲು ಕೆಲವೇ ದಿನಗಳು ಸಾಕು.
ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ ಚುನಾವಣಾ ಪ್ರಕ್ರಿಯೆ ಆರಂಭಗೊಳ್ಳುವುದು ಅಗತ್ಯ. ಬೆಂಗಳೂರು ಹಾಗೂ ಸುತ್ತಲೂ ಅಕ್ರಮ ದಂಧೆ ನಡೆಸಿರುವ ಭೂಮಾಫಿಯಾ ಮುಂತಾದ ಶಕ್ತಿಗಳು ಮೇಲುಗೈ ಸಾಧಿಸಲು ಹವಣಿಸುತ್ತವೆ. ಹಣ, ಆಮಿಷ, ಮೈತ್ರಿ ತೋಳ್ಬಲ ಬಳಸಿ ಪ್ರಜಾಸತ್ತಾತ್ಮಕ ಪ್ರಕ್ರಿಯೆಯನ್ನು ಬುಡಮೇಲು ಮಾಡಲು ಯತ್ನಿಸಲಿವೆ. ಇದಕ್ಕೆ ಕಡಿವಾಣ ಹಾಕಿ ಮುಕ್ತ, ನ್ಯಾಯಸಮ್ಮತ ಚುನಾವಣೆಗಳ ನಡೆಯುವಂತಾಗಬೇಕು. ಜನತೆಯ ಸಮಸ್ಯೆಗಳಿಗೆ ಪರಿಹಾರ ಕಾಣುವ ಜನಪರ ಮಹಾನಗರ ಪಾಲಿಕೆ ಆಯ್ಕೆ ಆಗಬೇಕು. ಮಹಾನಗರ ಪಾಲಿಕೆಯನ್ನು ವಿದೇಶಿ ಬ್ಯಾಂಕ್ಗಳಿಗೆ ಅಡವಿಡುವ ಹಾಗೆ ಕೋಮುವಾದಿ, ಜಾತೀವಾದಿ, ಜನವಿರೋಧಿಗಳನ್ನು ಸೋಲಿಸುವಲ್ಲಿ ಮಹತ್ವದ ಪಾತ್ರ ವಹಿಸುವಂತಾಗಬೇಕು. ಈ ದಿಶೆಯಲ್ಲಿ ಎಡಪಕ್ಷಗಳುಳ್ಳ ವಿಶಾಲ ಹೋರಾಟದ ವೇದಿಕೆಯಾಗಿರುವ ’ನಾಗರೀಕ ರಂಗ'ವನ್ನು ಜನತೆಯು ಆರಿಸಿ ಬಿಜೆಪಿ ಕಾಂಗ್ರೆಸ್, ಮುಂತಾದ ಪಕ್ಷಗಳಿಗೆ ಪರ್ಯಾಯ ರೂಪಿಸಬೇಕು.
ಸೌಜನ್ಯ: ಜನಶಕ್ತಿ